ಕೀನ್ಯ

ಪೂರ್ವ ಆಫ್ರಿಕದ ಒಂದು ಗಣರಾಜ್ಯ. ಉತ್ತರಕ್ಕೆ ಈಥಿಯೋಪಿಯ ಮತ್ತು ಸೂಡಾನ್ ಗಣರಾಜ್ಯ, ದಕ್ಷಿಣಕ್ಕೆ ಟಾಂಗನ್ಯೀಕ, ಪೂರ್ವಕ್ಕೆ ಹಿಂದೂ ಸಾಗರ ಮತ್ತು ಸೊಮಾಲಿ ಗಣರಾಜ್ಯ ಹಾಗೂ ಪಶ್ಚಿಮಕ್ಕೆ ಉಗಾಂಡ ಇವೆ. ಕೀನ್ಯದ ಒಟ್ಟು ವಿಸ್ತೀರ್ಣ 2,24,960 ಚ.ಮೈ. (ಇದರಲ್ಲಿ 5,171 ಚ.ಮೈ. ಜಲಾವೃತ ಪ್ರದೇಶವೂ ಸೇರಿದೆ). ಜನಸಂಖ್ಯೆ 86,36,263 (1962). ರಾಜಧಾನಿ ನೈರೋಬಿ (2,66,794). ಕೀನ್ಯಕ್ಕೆ ಆ ಹೆಸರು ಬಂದಿರುವುದು ಕೀನ್ಯ ಪರ್ವತದಿಂದಾಗಿ. ಅದನ್ನು ಕಿಕೂಯುಗಳು ಕೀರೀನ್ಯಾಗ (ಧವಳ ಪರ್ವತ) ಎಂದು ಕರೆಯುತ್ತಾರೆ.

 ಮೇಲ್ಮೈ ಲಕ್ಷಣ: ಇದರ ತೀರ ಪ್ರದೇಶ ದಕ್ಷಿಣದಲ್ಲಿರುವ ಉಂಬ ನದಿಯ ಮುಖಜಭೂಮಿಯಿಂದ ಉತ್ತರದ ಡಿಕ್ ನದೀಮುಖದ ವರೆಗೂ ಹಬ್ಬಿದೆ. ತೀರ ಅಂಕು ಡೊಂಕು: ಅನೇಕ ಕೊಲ್ಲಿಗಳೂ ಖಾರಿಗಳು ಇವೆ. ಮಾಂಬಾಸ ಮತ್ತು ಕಿಲಿಂಡೀನಿ ಉತ್ತಮವಾದ ಬಂದರುಗಳು. ಮಾಂಬಾಸ, ಲಾಮು ಮಂಡ ಮತ್ತು ಪಟ್ಟ ದ್ವೀಪಗಳು ಮುಖ್ಯ ಭೂಭಾಗದಿಂದ ಬೇರ್ಪಟ್ಟಿವೆ. ಕರಾವಳಿಯ ಮೈದಾನ 2 ರಿಂದ 10 ಮೈಲಿಗಳಷ್ಟು ಅಗಲವಾಗಿದೆ. ಪಶ್ಚಿಮಕ್ಕೆ ಹೋದಂತೆಲ್ಲ ಭೂಮಿಯ ಎತ್ತರ ಹೆಚ್ಚುತ್ತ ಹೋಗಿ ಸು. 5,000'ಗೆ ಏರುತ್ತದೆ. ನಿಯಿಕ ಪ್ರದೇಶದಲ್ಲಿಯ ಬೆಟ್ಟಗುಡ್ಡಗಳು ಜಲಜಶಿಲೆಗಳಿಂದ ಮಾರ್ಪಟ್ಟಿವೆ. ಟೇಟ ಮತ್ತು ಪಶ್ಚಿಮ ಮೆಚ ಕೋಸ್‍ಗಳು ಬಿಡಿ ಪರ್ವತಗಳು. ಯಟ್ಟಾ ಪ್ರಸ್ಥಭೂಮಿ, ಚೀಯೂಲು ಶ್ರೇಣಿ ಮತ್ತು ಕಿಲಿಮಾಂಜಾರೋ ಪರ್ವತಗಳಲ್ಲಿ ಅನೇಕ ಜ್ವಾಲಾಮುಖಿಗಳುಂಟು. ರೂಡಾಲ್ಫ್ ಸರೋವರದ ಪೂರ್ವಕ್ಕಿರುವ ಕೂಲಾಲ್ ಜ್ವಾಲಾಮುಖಿಯ ಕುಪ್ಪೆಯ ಎತ್ತರ 7,520'. ಮಾರ್ಸಾಬಿಟ್ 5,593' ಎತ್ತರವಾಗಿದೆ. ಇವುಗಳ ಸುತ್ತಮುತ್ತಲೂ ಬರಡು ನೆಲ ಹರಡಿದೆ.

 ಪೂರ್ವ ಕೀನ್ಯದಲ್ಲಿರುವ ರಿಫ್ಟ್ ಕಣಿವೆಯ ಪೂರ್ವದ ಅಂಚು ಕಡಿದಾಗಿಯೂ ಎತ್ತರವಾಗಿಯೂ ಇದೆ. ಅಲ್ಲಿರುವ ಅಬರ್‍ದಾರ್ ಶ್ರೇಣಿಯ ಸರಾಸರಿ ಎತ್ತರ 11,000'. ಅಲ್ಲಿಯ ಸಟ್ಟಿಮ್ಮ ಮತ್ತು ಕಿನಾಂಗಾಪ್ ಶಿಖರಗಳು ಅನುಕ್ರಮವಾಗಿ 13,104' ಹಾಗೂ 12,810' ಎತ್ತರವಾಗಿವೆ. ಇದರ ಉತ್ತರಕ್ಕಿರುವ ಲೈಕೀಪೀಯ ಪ್ರದೇಶದ ಎತ್ತರ 6,000'. ನೈರೋಬಿಯ ದಕ್ಷಿಣ ಭಾಗದಲ್ಲಿ ಆತಿ ಮತ್ತು ಕಪಿಟೆ ಮೈದಾನಗಳಿವೆ. ಅಬರ್‍ದರ್ ಶ್ರೇಣಿಗಳು ಪೂರ್ವ ಆಗ್ನೇಯಗಳ ಕಡೆ ಇಳಿಜಾರಾಗಿ ಸಾಗಿ ಮತ್ತೆ ಎತ್ತರವಾಗುತ್ತವೆ. ಕೀನ್ಯ ಪರ್ವತ (17,058') ಇರುವುದು ಇಲ್ಲೇ. ಮೇರುವಿನ ಈಶಾನ್ಯಕ್ಕೆ ನ್ಯಾಂಬೇನಿ ಶ್ರೇಣಿಯಿದೆ. ಇದು ಜ್ವಾಲಾಮುಖಿ ನಿರ್ಮಿತವಾದ್ದು.

 ರಿಫ್ಟ್ ಕಣಿವೆ 30-40 ಮೈ. ಅಗಲವಾಗಿದ್ದು ಸುತ್ತಮುತ್ತಲಿನ ಪ್ರದೇಶಕ್ಕಿಂತ 2,000'-3,000' ಆಳವಾಗಿದೆ.  ಈ ಕಣಿವೆಯ ಉದ್ದಕ್ಕೂ ಅನೇಕ ಬೆಟ್ಟಗುಡ್ಡಗಳೂ, ಜ್ವಾಲಾಮುಖಿಗಳೂ, ಆಳವಿಲ್ಲದ ಸರೋವರಗಳೂ ಉಂಟು. ಇವುಗಳಲ್ಲಿ ಮಗಾಡಿ, ನೈವಾಷ, ಎಲ್ಮೆಂಟೇಟ, ನಾಕೂರು, ಹ್ಯಾನಿಂಗ್ಮನ್ ಮತ್ತು ಬಾರಿಂಗೊ ಮುಖ್ಯ. ರಿಫ್ಟ್ ಕಣಿವೆಯ ಪಶ್ಚಿಮಪಾಶ್ರ್ವ ಪೂರ್ವಪಾಶ್ರ್ವಕ್ಕಿಂತ ಕಡಿದಾಗಿಲ್ಲದಿದ್ದರೂ ಹೆಚ್ಚು ಎತ್ತರವಾಗಿದೆ. ಇದರ ಸರಾಸರಿ ಎತ್ತರ 9,000' ಗಿಂತ ಹೆಚ್ಚು. ಈ ಉನ್ನತ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಟ್ರಾನ್ಸ್-ನ್ಜೋಯ ಮತ್ತು ವಾಸಿನ್‍ಗೀಷು ಪ್ರಸ್ಥಭೂಮಿಗಳು ಮತ್ತು ದಕ್ಷಿಣಕ್ಕಿರುವ ನಾಂದಿ ಮತ್ತು ಕೆರಿಚೋ ಪರ್ವತ ಪ್ರದೇಶ-ಇವೆಲ್ಲ 6,000'-7,000' ಎತ್ತರದಲ್ಲಿದೆ. ಪರ್ವತ ಪ್ರದೇಶದ ಪಶ್ಚಿಮದ ತುದಿಯಲ್ಲಿರುವ ಎಲ್‍ಗಾನ್ ಶಿಖರದ ಎತ್ತರ 14,178'. ಇದು ಉಗಾಂಡ ಗಡಿಯಲ್ಲಿದೆ.

 ಪಶ್ಚಿಮ ಕೀನ್ಯದ ಪರ್ವತ ಪ್ರದೇಶದ ಎತ್ತರ 5,000'-3,200'. ಪ್ರಸ್ಧಭೂಮಿಯ ನಡುವೆ ತಗ್ಗುನೆಲ ಹಬ್ಬಿದೆ. ದಕ್ಷಿಣದಲ್ಲಿ ಕಿಸೈ ಪರ್ವತ ಪ್ರದೇಶವೂ ಗ್ವಾಸಿ ಮತ್ತು ಹೋಮ ಜ್ವಾಲಾಮುಖಿಗಳೂ ಮುಖ್ಯವಾದುವು. ಈ ಪ್ರದೇಶದ ಭಾಗದಲ್ಲಿ ದೊಡ್ಡ ಗ್ರಾನೈಟ್ ಗುಡ್ಡಗಳಿವೆ.

 ಕೀನ್ಯದ ರಿಫ್ಟ್ ಕಣಿವೆಯ ಪಶ್ಚಿಮದ ಜಲೋತ್ಸಾರಣ ಪ್ರದೇಶದಲ್ಲಿ ಹರಿಯುವ ನದಿಗಳು ವಿಕ್ಟೋರಿಯ ಸರೋವರವನ್ನು ಸೇರುತ್ತವೆ. ಪೂರ್ವದ ನದಿಗಳು ಹಿಂದೂ ಸಾಗರದ ಕಡೆಗೆ ಹರಿಯುತ್ತವೆ. ಕೀನ್ಯದ ದೊಡ್ಡ ನದಿ ಟಾನ. ಇದರ ಉದ್ದ 500 ಮೈ. ಅತಿ-ಸಾಬಾಕಿ-ಗಾಲಾನ ನದೀ ಟಾನ. ವ್ಯವಸ್ಧೆಯ ಉದ್ದ 340 ಮೈ. ಇದು ನೈರೋಬಿಯ ಉತ್ತರದಲ್ಲಿ ಉಗಮಿಸಿ ಮಲಿಂಡಿಯ ಬಳಿ ಹಿಂದೂ ಸಾಗರವನ್ನು ಸೇರುತ್ತದೆ. ವಾಸೋನೀರೋ ನದಿಯ ಉಗಮ ಲೈಕಿಪಿಯ ಪ್ರಸ್ಧಭೂಮಿಯಲ್ಲಿ, ಇದು ಪೂರ್ವ ಮುಖವಾಗಿ ಹರಿದು ಲೊರಿಯನ್ ಜವುಗು ಪ್ರದೇಶವನ್ನು ಸೇರುತ್ತದೆ. 

 ವಾಯುಗುಣ: ಸಮಭಾಜಕದ ಆಚೀಚೆ ಹಬ್ಬಿರುವ ಕೀನ್ಯದ ಅನೇಕ ಕಡೆ ವರ್ಷಕ್ಕೆ 30” ಗಿಂತ ಕಡಿಮೆ ಮಳೆಯಾಗುತ್ತದೆ; ಉತ್ತರ ಕೀನ್ಯದಲ್ಲಿ 10" ಗಿಂತ ಕಡಿಮೆ. ಅಧಿಕ ಉಷ್ಣತೆ ಮತ್ತು ಬಾಷ್ಪೀಕರಣದಿಂದಾಗಿ ಶುಷ್ಕತೆ ಹೆಚ್ಚು. ಮಳೆ ಬಹಳ ಅನಿಶ್ಚಿತ. ಕೆಲವು ವರ್ಷಗಳಲ್ಲಿ ಅನಾವೃಷ್ಟಿಯ ಕ್ಷೇತ್ರ ವಿಸ್ತರಿಸುವುದುಂಟು ತೀರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುತ್ತದೆ. ಇಲ್ಲಿಯ ಸರಾಸರಿ ಉಷ್ಣತೆ 70º ಫ್ಯಾ. ಜನವರಿ-ಮಾರ್ಚಿಯಲ್ಲಿ ಸೆಖೆ ಹೆಚ್ಚು; ಜೂನ್-ಜುಲೈ ತಂಪು ಕಾಲ. ಸಾಗರ ಮಾರುತ ಆಹ್ಲಾದಕರ; ಅಲ್ಲಿ ಬಿಸಿಲು ಹೆಚ್ಚು, ಪೂರ್ವ ಕೀನ್ಯದ ಉನ್ನತ ಪ್ರದೇಶಗಳಲ್ಲಿ ತಕ್ಕಮಟ್ಟಿನ ಮಳೆಯಾಗುತ್ತದೆ. ಅಲ್ಲಿ ಮಾರ್ಚಿಯಿಂದ ಮೇ ವರೆಗೆ ಮಳೆಗಾಲ. ಅಕ್ಟೋಬರಿನಿಂದ ಡಿಸೆಂಬರಿನ ವರೆಗಿನ ಕಾಲದಲ್ಲೂ ಮಳೆಯಾಗುತ್ತದೆ. 7,000' ಗಿಂತ ಹೆಚ್ಚು ಎತ್ತರವಾಗಿರುವ ಪ್ರದೇಶದಲ್ಲಿ ಮಂಜು ಸುರಿಯುತ್ತದೆ. ಕೀನ್ಯ ಪರ್ವತ ಶಿಖರ ಪ್ರದೇಶದಲ್ಲಿ ಅನೇಕ ಹಿಮನದಿಗಳುಂಟು; ಪಶ್ಚಿಮ ಕೀನ್ಯದ ಪ್ರಸ್ಧಭೂಮಿಗಳಲ್ಲಿ ಸಮನಾಗಿ ಮಳೆಯ ಹಂಚಿಕೆಯಾಗಿದೆ. ಆದರೆ ಕಿಸೂಮು ಮೈದಾನ ಹಾಗೂ ವಿಕ್ಟೋರಿಯ ಸರೋವರತೀರದಲ್ಲಿ ಮಳೆ ಕಡಿಮೆ.

 ಸ್ವಾಭಾವಿಕ ಸಸ್ಯಗಳು: 6,000'-10,000' ಎತ್ತರದ ಪ್ರದೇಶಗಳಲ್ಲಿ ಅಲ್ಲಲ್ಲಿ ನಿತ್ಯಹಸಿರು ಕಾಡುಗಳುಂಟು. ಇವುಗಳ ಕೆಳಭಾಗದಲ್ಲಿ ಹುಲ್ಲುಗಾವಲುಗಳಿವೆ. ಕೀನ್ಯದ ಅರಣ್ಯಗಳ ಒಟ್ಟು ವಿಸ್ತೀರ್ಣ 6,719 ಚ.ಮೈ. ಇವೆಲ್ಲವೂ ಪೂರ್ತಿಯಾಗಿ ಉನ್ನತಪ್ರದೇಶಗಳಲ್ಲಿವೆ. ಇವುಗಳಿಗಿಂತ ಮೇಲೆ ಬಿದಿರು ಬೆಳೆದಿದೆ. ಅದಕ್ಕೂ ಎತ್ತರದ ನೆಲ ಬಹುತೇಕ ಬಂಜರು. ಅಲ್ಲಲ್ಲಿ ಕುರುಚಲುಗಳು ಬೆಳೆದಿವೆ. ಪಶ್ಚಿಮದ ಪ್ರಸ್ಧಭೂಮಿಯಲ್ಲಿ ವಿಸ್ತಾರವಾದ ಹುಲ್ಲುಗಾವಲೂ ಅಲ್ಲಲ್ಲಿ ಮರಗಳೂ ಉಂಟು. ಮೇಲೆ ವಿವರಿಸಿದ ಸಸ್ಯ ಪ್ರಕಾರಗಳಿರುವುದು ಟೈಕಿಪಿಯ, ರಿಫ್ಟ್‍ಕಣಿವೆ ಮತ್ತು ನೈರೋಬಿಯ ದಕ್ಷಿಣ ಭಾಗದಲ್ಲಿ. 3,000'ಗಿಂತ ತಗ್ಗಿನ ಪ್ರದೇಶಗಳು ಅರೆಮರುಭೂಮಿಗಳು; ಇಲ್ಲಿ ಮುಳ್ಳುಪೊದೆ ಮತ್ತು ಕುರುಚಲು ಸಾಮಾನ್ಯ. ಉತ್ತರ ಕೀನ್ಯದ ಇನ್ನೂ ಒಣಪ್ರದೇಶಗಳು ಮರುಭೂಮಿಗಳು. ಕರಾವಳಿಯಲ್ಲಿ ಅಲ್ಲಲ್ಲಿ ದಟ್ಟವಾದ ಕಾಡುಗಳೂ ಭರತದ ಅಂಚುಗಳಲ್ಲಿ ತೆಂಗು ತಾಳೆಗಳೂ ಅಳಿವೆಗಳ ಪ್ರದೇಶಗಳಲ್ಲಿ ಗುಲ್ಮವೃಕ್ಷಗಳೂ ಸಾಮಾನ್ಯವಾಗಿವೆ.

 ಪ್ರಾಣಿಗಳು: ಕೀನ್ಯದ ಕುರುಚಲು ಪೊದೆಗಳ ಪ್ರದೇಶಗಳು ಅನೇಕ ವನ್ಯ ಮೃಗಗಳ ಬೀಡುಗಳಾಗಿವೆ. ಸಿಂಹ, ಚಿರತೆ, ಕಡವೆ, ಕಾಡುನಾಯಿ, ಕಾಡೆಮ್ಮೆ, ಘೇಂಡಾ ಮೃಗ. ಹೇಸರಗತ್ತೆ, ಜಿರಾಫೆಗಳು ಅಧಿಕ ಸಂಖ್ಯೆಯಲ್ಲಿವೆ. ದೊಡ್ಡ ದೊಡ್ಡ ನದಿಗಳಲ್ಲೂ ಸರೋವರಗಳಲ್ಲೂ ನೀರಾನೆಗಳೂ ಮೊಸಳೆಗಳೂ ಮೀನುಗಳೂ ಹೇರಳವಾಗುಂಟು. ನರಿ, ಬಬೂನ್ ಮತ್ತು ಕೋಲೂಬಸ್ ಕೋತಿಗಳೂ ಇವೆ. ನರಿ, ಬಬೂನ್ ಮತ್ತು ಕೋಲೊಬಸ್ ಕೋತಿಗಳೂ ಇವೆ. ಹೆಬ್ಬಾವು, ನಾಗರಹಾವು ಮತ್ತು ಮಾಂಬಾಜಾ ಹಾವುಗಳಿಗೂ ಅನೇಕ ವಿಷಕೀಟಗಳಿಗೂ ಕ್ರಿಮಿ ಕೀಟಗಳಿಗೂ ಇದು ನೆಲೆ. ಉಷ್ಟ್ರಪಕ್ಷಿ, ಕೊಕ್ಕರೆ, ರಣಹದ್ದು, ಗೂಬೆ, ಬಾತು, ಪೆಲಿಕನ್- ಇವು ಕೆಲವು ಹಕ್ಕಿಗಳು. ಕೀನ್ಯದ ವನಗಳು ಮೃಗಯಾ ವಿಹಾರಕ್ಕಾಗಿ ಪ್ರಸಿದ್ಧವಾಗಿವೆ. ಇವು ಸೌಂದರ್ಯದ ನೆಲೆಗಳು ವಿಶ್ವದ ಎಲ್ಲ ಭಾಗಗಳಿಂದಲೂ ಪ್ರವಾಸಿಗಳನ್ನು ಇವು ಆಕರ್ಷಿಸಿವೆ. ನೈರೋಬಿ ವನ (44 ಚ.ಮೈ.) ಟ್ಸ್ಯಾವೋ ವನ (8,034 ಚ.ಮೈ) ಮೌಂಟ್ ಕೀನ್ಯ (227 ಚ.ಮೈ.) ಆಬರ್‍ದಾರ್ (228 ಚ.ಮೈ.) ಆಂಬೋಸೀಲಿ (1,259 ಚ.ಮೈ.) ಮಾರಾ (700 ಚ.ಮೈ.) ಮತ್ತು ಮೇರು (600 ಚ.ಮೈ.)-ಇವು ಕೀನ್ಯದ ಮುಖ್ಯ ರಾಷ್ಟ್ರೀಯ ವನಗಳು.

 ಜನಜೀವನ: ಕೀನ್ಯದ ಜನರಲ್ಲಿ ಆಫ್ರಿಕನೇತರರು ಕೇವಲ 3% ಇದ್ದರು. ಇವರ ಸಂಖ್ಯೆ ಈಚೆಗೆ ಕಡಿಮೆಯಾಗಿದೆ. ಐರೋಪ್ಯರು ಹಿಂದೆ ಇಲ್ಲಿ ವಾಣಿಜ್ಯ, ಕೃಷಿಗಳಲ್ಲಿ ಅಧಿಕವಾಗಿ ನಿರತರಾಗಿದ್ದರು. ವಲಸೆಗಾರರಲ್ಲಿ ಭಾರತೀಯರೂ ಪಾಕಿಸ್ತಾನಿಗಳೂ ಅಧಿಕ 
ಸಂಖ್ಯೆಯಲ್ಲಿದ್ದಾರೆ. (1962:1,76,000) ಸು. 50,000 ಮಂದಿ ಅರಬರಿದ್ದಾರೆ. ಇವರ ವಾಸ ಬಹುತೇಕ ಕರಾವಳಿಯಲ್ಲಿ. ಆಫ್ರಿಕನ್ ಜನರಲ್ಲಿ ಬಹುಸಂಖ್ಯಾತರು ಸ್ಧಳೀಯ ಮತಗಳನ್ನನುಸರಿಸುವವರು. ಕ್ರೈಸ್ತರು ಸು. 25% ರಷ್ಟು ಇದ್ದಾರೆ. ಮುಸ್ಲಿಮರು 6%. ಇವರಲ್ಲಿ ಬಹುಮಂದಿ ಆಗಾಖಾನನ ಇಸ್ಮೇಲಿ ಅನುಯಾಯಿಗಳು. ಕೀನ್ಯದ ಅಧಿಕೃತ ಭಾಷೆಗಳು ಇಂಗ್ಲಿಷ್ ಮತ್ತು ಸ್ವಾಹೀಲಿ. ಕಿಕೂಯು ಮತ್ತು ಲುವೋ ಭಾಷೆಗಳು ಪ್ರಚಾರದಲ್ಲಿವೆ.

 ಕೀನ್ಯ ಷಿಲಿಂಗ್ ಇಲ್ಲಿಯ ನಾಣ್ಯ. ಇದನ್ನು 1966ರಲ್ಲಿ ಪೂರ್ವ ಆಫ್ರಿಕನ್ ಷಿಲಿಂಗಿನ ಬದಲು ಚಲಾವಣೆಗೆ ತರಲಾಯಿತು.

 ಕೀನ್ಯದ ರಾಜಧಾನಿ ನೈರೋಬಿ. ಇತರ ಮುಖ್ಯ ನಗರಗಳೂ ಪಟ್ಟಣಗಳೂ ಇವು (1962ರಲ್ಲಿದ್ದಂತೆ ಇವುಗಳ ಜನಸಂಖ್ಯೆಗಳನ್ನು ಆವರಣಗಳೊಳಗೆ ಕೊಟ್ಟಿದೆ): ಮಾಂಬಾಸ (1,79,575), ನಾಕೂರು (38,181), ಕೀಸೂಮು (23,526), ಎಲ್ಡೊರೆಟ್ (19,605) ಮತ್ತು ಕಿಟಾಲೆ (9,342).

 ಕೃಷಿ: ಆಫ್ರಿಕದ ಬಹುಪಾಲು ರಾಷ್ಟ್ರಗಳಂತೆ ಕೀನ್ಯವೂ ಆರ್ಥಿಕ ದೃಷ್ಟಿಯಿಂದ ಹಿಂದುಳಿದ ರಾಷ್ಟ್ರ. ಕೀನ್ಯದ ಅರ್ಥವ್ಯವಸ್ಧೆ ಮೂಲಭೂತವಾಗಿ ಕ್ಥಷಿಮೂಲವಾದ್ದು. ಕೈಗಾರಿಕೋದ್ಯಮ ಎರಡನೆಯ ಮಹಾಯುದ್ಧದಿಂದೀಚೆಗೆ ಬೆಳೆಯುತ್ತ ಬಂದಿದ್ದರೂ ಕೀನ್ಯದ ಅರ್ಥವ್ಯವಸ್ಧೆಯಲ್ಲಿ ಅದರ ಸ್ಧಾನ ಇನ್ನೂ ಕೆಳಮಟ್ಟದಲ್ಲಿಯೇ ಇದೆ. 1954ರಲ್ಲಿ ಕೀನ್ಯದ ರಾಷ್ಟ್ರೀಯ ವರಮಾನದ 47% ಕೃಷಿಯಿಂದ ಬಂದಿತ್ತು. ಕೈಗಾರಿಕೆಯ ಪಾಲು ಕೇವಲ 10%. ಅಲ್ಲಿಂದೀಚೆಗೆ ಪರಿಸ್ಧಿತಿ ಸ್ವಲ್ಪ ಉತ್ತಮಗೊಂಡಿದೆ. 1966ರಲ್ಲಿ ಕೃಷಿ ಕೈಗಾರಿಕೆಗಳ ಪಾಲು ಅನುಕ್ರಮವಾಗಿ 36% ಮತ್ತು 14% ಎಂದು ಅಂದಾಜು ಮಾಡಲಾಗಿದೆ.

 ಕಾಫಿ, ಚಹ, ಸಕ್ಕರೆ, ಕತ್ತಾಳೆ ನಾರು, ಜೋಳ, ಗೋದಿ, ಓಟ್ಸ್ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು.  ಮಾಂಸ ಮತ್ತು ಹೈನುವಸ್ತುಗಳ ಉತ್ಪಾದನೆಯೂ ಗಮನಾರ್ಹವಾಗಿದೆ.

 ಕೃಷಿಕಾರ್ಯ ಕೀನ್ಯದ ಪ್ರಸ್ಧಭೂಮಿ ಬಯಲುಸೀಮೆ ಹಾಗೂ ತೀರ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿದೆ. ಪ್ರಸ್ಧಭೂಮಿ ಪ್ರದೇಶದಲ್ಲಿ 90% ರಷ್ಟು ಭೂಮಿಯ ಮಾಲೀಕತ್ವ ಐರೋಪ್ಯರದು. ಇವರು ಕಾಫಿ, ಚಹ, ಕತ್ತಾಳೆ ನಾರು ಮೊದಲಾದ ಪ್ಲಾಂಟೇಷನ್ ಬೆಳೆಗಳ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಏಷ್ಯನರು ಮುಖ್ಯವಾಗಿ ಕಬ್ಬು ಬೆಳೆ ಮತ್ತು ಅದರ ಸಂಸ್ಕರಣದಲ್ಲಿ ನಿರತರಾಗಿದ್ದಾರೆ. ಆಫ್ರಿಕನ್ನರು ಆಹಾರವಸ್ತುಗಳನ್ನು ಬೆಳೆಯುವುದರ ಜೊತಗೆ ಅಲ್ಪ ಪ್ರಮಾಣದಲ್ಲಿ ಕಾಫಿ, ಹತ್ತಿ ಚಹ ಮತ್ತು ಕತ್ತಾಳೆ ನಾರುಗಳನ್ನೂ ಬೆಳೆಯುತ್ತಾರೆ. ಈಚಗೆ ಕೀನ್ಯ ಸರ್ಕಾರ ಆಫ್ರಿಕನ್ನರ ಸ್ಥಿತಿಯನ್ನು  ಉತ್ತಮಪಡಿಸುವ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳಲ್ಲಿ ಅವರನ್ನು ಕೃಷಿ ಉದ್ಯಮಗಳಲ್ಲಿ ನೆಲೆಗೊಳಿಸುವುದೂ ಒಂದಾಗಿದೆ. ಕೀನ್ಯದ ಪ್ರಸ್ಥ್ಧಭೂಮಿ ಪೃದೇಶದ ಜಮೀನಿನಲ್ಲಿ ಎಲ್ಲರಿಗೂ ಸಾಗುವಳಿಗೆ ಅವಕಾಶ ಮಾಡಿಕೊಟ್ಟಿರುವುದರ ಜೊತೆಗೆ ಸರ್ಕಾರ ಐರೋಪ್ಯರಿಂದ ಕೊಂಡ ಭೂಮಿಯಲ್ಲಿ ಆಫ್ರಿಕನರನ್ನು ನೆಲೆಗೊಳಿಸುವ ಬೃಹತ್ ಯೋಜನೆಯೊಂದನ್ನು  ಕೈಗೊಂಡಿದೆ.

 ಕೀನ್ಯ ಆಹಾರ ವಿಚಾರದಲ್ಲಿ ಬಹುತೇಕ ಸ್ವಯಂಪೂರ್ಣತೆ ಪಡೆದಿದೆ. ಕೀನ್ಯದ ಕಾಡುಗಳು ಸ್ಧಳೀಯ ಮರಮುಟ್ಟಿನ ಬೇಡಿಕೆಯನ್ನು ಪೂರೈಸುವುದರ ಜೋತೆಗೆ ರಫ್ತಿಗಾಗಿಯೂ ಮರಗಳನ್ನು ಒದಗಿಸುತ್ತವೆ. ಸರ್ಕಾರ ಈಚೆಗೆ ಪುನರ್ನವೀಕರಣ ಕಾರ್ಯಕ್ರಮವನ್ನು ಕೈಗೊಂಡು ಕಾಡುಗಳನ್ನು ವೃದ್ಧಿಗೊಳಿಸುವುದರಲ್ಲಿ ನಿರತವಾಗಿದೆ. ಕೀನ್ಯದಲ್ಲಿ ಸಮುದ್ರತೀರ ಸಾಕಷ್ಟಿದ್ದರೂ ಸಾಗರಮತ್ಸ್ಯೋತ್ಪನ್ನ ದೇಶದ ಒಟ್ಟು ಮತ್ಸ್ಯೋತ್ಪನ್ನದ 1/5 ರಷ್ಟು ಮಾತ್ರ.  ವಿಕ್ಟೋರಿಯ ಸರೋವರ ಮುಖ್ಯ ಮತ್ಸ್ಯೋದ್ಯಮ ಕೇಂದ್ರ.

 ಖನಿಜ, ಕೈಗಾರಿಕೆ: ಕೀನ್ಯದಲ್ಲಿ ಹೆಚ್ಚು ಖನಿಜ ನಿಕ್ಷೇಪಗಳಿಲ್ಲ. ಚಿನ್ನ ಬೆಳ್ಳಿ, ತಾಮ್ರ, ಸುಣ್ಣಕಲ್ಲು, ಉಪ್ಪು ಮುಂತಾದವು ಇದ್ದರೂ ಬಹು ಕಡಿಮೆ. ಕಲ್ಲಿದ್ದಲು ಮತ್ತು ಕಬ್ಬಿಣದ ಅದುರುಗಳು ಕೀನ್ಯದಲ್ಲಿ ದೊರಕುವುದಿಲ್ಲ. ಆದರೂ ಈಚೆಗೆ ಅಲ್ಲಿಯ ಸರ್ಕಾರ 
ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕೈಕೊಂಡಿದೆ. ದೇಶದ ಸ್ವಸಂಪೂರ್ಣತೆ ಸಾಧಿಸುವ ಉದ್ದೇಶದಿಂದ ಬಂಡವಾಳವಸ್ತುಗಳಿಗಿಂತ ಅನುಭೋಗಿವಸ್ತು ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಆಹಾರ ಪದಾರ್ಥ, ಸಿಗರೇಟ್, ಉಣ್ಣೆಯ ಹೊದಿಕೆಗಳು, ಪಾದರಕ್ಷೆ ಮತ್ತಿತರ ಅನುಭೋಗ ವಸ್ತುಗಳ ಕಾರ್ಖಾನೆಗಳನ್ನು ಮುಖ್ಯ ನಗರಗಳಲ್ಲಿ ಸ್ಧಾಪಿಸಲಾಗಿದೆ.

 ಅಂತರರಾಷ್ಟ್ರೀಯ ವ್ಯಾಪಾರ: ಕೀನ್ಯದ ರಫ್ತುಗಳಲ್ಲಿ ಮುಖ್ಯವಾದವು ಕಾಫಿ, ಕತ್ತಾಳೆ ನಾರು, ಚಹ, ಮಾಂಸ ಹಾಗೂ ಚರ್ಮ. ಕೈಗಾರಿಕಾವಸ್ತುಗಳು, ಯಂತ್ರಗಳು ಮತ್ತು ಪೆಟ್ರೋಲಿಯಂ ಮುಖ್ಯ ಆಮದುಗಳು. ಕೀನ್ಯದ ರಪ್ತುಗಳ 1/3 ಭಾಗ ಬ್ರಿಟಿನಿಗೂ 1/3 ಭಾಗ ಅಮೆರಿಕ ಸಂಯುಕ್ತ ಸಂಸ್ಧಾನ ಮತ್ತು ಪಶ್ಚಿಮ ಜರ್ಮನಿಗೂ ಹೋಗುತ್ತದೆ. ಅದರ ಆಮದುಗಳಲ್ಲಿ ಬಹುಭಾಗ ಬ್ರಿಟನ್, ಜಪಾನ್, ಜರ್ಮನಿ ಮತ್ತು ಇರಾನ್‍ಗಳಿಂದ ಬರುತ್ತದೆ. ಅದರ ವ್ಯಾಪಾರಶಿಲ್ಕು ಅದಕ್ಕೆ ಸಾಮಾನ್ಯವಾಗಿ ಅನುಕೂಲಕರವಾಗಿಲ್ಲ.

 ಸಾರಿಗೆ ಸಂಪರ್ಕ: ಕೀನ್ಯ ಮತ್ತು ಉಗಾಂಡಗಳ ಆಮದು ರಫ್ತುಗಳ ಬಹುಭಾಗ ಸಾಗುವುದು ಮಾಂಬಾಸದ ಮೂಲಕ. ಇದು ಪೂರ್ವ ಆಫ್ರಿಕದ ಅತಿದೊಡ್ಡ  ಬಂದರು. 1896ರಲ್ಲಿ ಆರಂಭವಾಗಿ 1901ರಲ್ಲಿ ಪೂರ್ಣಗೊಂಡ ಉಗಾಂಡ ರೈಲ್ವಯಿಂದ ಮಾಂಬಾಸಕ್ಕೂ ವಿಕ್ಟೋರಿಯ ಸರೋವರದ ದಂಡೆಯ ಕೀಸೂಮುವಿಗೂ ಸಂಪರ್ಕ ಏರ್ಪಟ್ಟಿದೆ. ಅಲ್ಲಿಂದ ಉಗಾಂಡಕ್ಕೆ ಜಹಜು ಸಂಪರ್ಕವುಂಟು. 1931ರಲ್ಲಿ ನಾಕೂರುವಿನಿಂದ ವಾಸಿನ್ ಗೀಷು ಪ್ರಸ್ಧಭೂಮಿಯ ಮೂಲಕ ಉಗಾಂಡದ ಕಾಂಪಾಲಕ್ಕೆ ರೈಲ್ವೆಸಂಪರ್ಕ ಕಲ್ಪಿಸಲಾಯಿತು. 1951ರಲ್ಲಿ ಈ ರೈಲು ಮಾರ್ಗವನ್ನು ಪಶ್ಚಿಮ ಉಗಾಂಡದ ಕಾಸೇಸೆ ವರೆಗೂ ವಿಸ್ತರಿಸಲಾಯಿತು. ಹೀಗಾಗಿ ಮಾಂಬಾಸದ ಹಿನ್ನಾಡಿನಲ್ಲಿ 1,036 ಮೈಲಿಗಳಷ್ಟು ಉದ್ದದ ರೈಲ್ವೆ ಸಂಪರ್ಕ ಕಲ್ಪಿಸಿದಂತಾಗಿದೆ. ವಾಯಿಯಿಂದ ಕಾಹೆಗೆ (ಟಾಂಗನ್ಯೀಕ) ಹಾಕಲಾಗಿರುವ ರೈಲುಮಾರ್ಗದ ಉದ್ದ 94 ಮೈ. ಇದರಿಂದ ಟಾಂಗ ರೈಲುಮಾರ್ಗಕ್ಕೆ ಸಂಬಂಧ ಏರ್ಪಟ್ಟಿದೆ. ಮಗಾಡಿ ಸರೋವರದ ಸೋಡ ಉತ್ಪನ್ನವನ್ನು ಸಾಗಿಸಲು ಕೋನ್ಜóರಿಂದ ಕವಲೊಡೆಯುವ ಮಾರ್ಗ ಅನುಕೂಲಕರವಾಗಿದೆ. ಇತರ ರೈಲುಮಾರ್ಗಗಳು ಪರ್ವತನಾಡಿನ ಕೃಷಿ ಪ್ರದೇಶಗಳಿಗೆ ಉಪಯುಕ್ತವಾಗಿವೆ.

 ರಸ್ತೆಗಳು ಅಷ್ಟೇನೂ ಅಭಿವೃದ್ಧಿ ಹೊಂದಿಲ್ಲ. 1960ರಲ್ಲಿದ್ದ ರಸ್ತೆಗಳ ಉದ್ದ 26,000 ಮೈ,  ಇದರಲ್ಲಿ ಹೆದ್ದಾರಿಗಳ ಉದ್ದ 3,700 ಮೈ. ಮಾತ್ರ. ಇದರಲ್ಲಿ ಬಿಟ್ಯುಮೆನ್ ರಸ್ತೆಗಳ ಉದ್ದ ಕೇವಲ 634 ಮೈ.

 ನೈರೋಬಿಗೆ ಆಗ್ನೆಯದಲ್ಲಿರುವ ಎಂಬಾಸಾಕಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

(ಕೆ.ಎನ್.ಸಿ.; ಎ.ಬಿ.ಎ.)

 ಇತಿಹಾಸ: ಕೀನ್ಯ ಹಲವಾರು ಶತಮಾನಗಳ ಕಾಲ ದಕ್ಷಿಣ ಅರೇಬಿಯದೊಂದಿಗೆ ವ್ಯಾಪಾರ ಸಂಪರ್ಕ ಪಡೆದಿತ್ತೆಂಬುದೇ ಅದರ ವಿಷಯವಾಗಿ ತಿಳಿದು ಬರುವ ಪ್ರಾಚೀನತಮ ಚಾರಿತ್ರಕ ವಿಷಯ. ತೀರಪ್ರದೇಶವನ್ನು ಬಿಟ್ಟರೆ ಒಳನಾಡಿನ ವಿಚಾರ 19ನೆಯ ಶತಮಾನದ ಮಧ್ಯಕಾಲದವರೆಗೆ ಏನೇನೂ ತಿಳಿದಿರಲಿಲ್ಲ. ಈ ಸಮಯದಲ್ಲಿ ಒಳನಾಡಿದಲ್ಲಿ ಹೇರಳವಾಗಿ ದೊರಕುತ್ತಿದ್ದ ದಂತದ ಅನ್ವೇಷಣೆಗಾಗಿ ಅರಬರೂ ಸ್ವಾಹೀಲಿ ತಂಡಗಳೂ ಕಿಲಿಮಾಂಜಾರೋ ಪರ್ವತ ಮತ್ತು ವಿಕ್ಟೋರಿಯ ಸರೋವರ ಪ್ರದೇಶಗಳಿಗೆ ಹೋಗಲಾರಂಭಿಸಿದರು. ಆದರೆ ಆ ಪ್ರದೇಶಗಳಲ್ಲಿದ್ದ ಮಾಸೈ ಜನರ ವಿರೋಧದಿಂದ ಆ ಪ್ರಯತ್ನಗಳು ಹೆಚ್ಚು ಫಲಕಾರಿಯಾಗಲಿಲ್ಲ. ಅನಂತರ ಜರ್ಮನಿಯ ಪಾದ್ರಿಗಳಾದ ಜೊಹಾನ್ ಲುಡ್ವಿಗ್ ಕ್ರಾಫ್ ಮತ್ತು ಜೊಹಾನೆಸ್ ರೆಬ್ಮನ್ ಇವರು ಮಾಂಬಾಸದ ಬಳಿಯ ರಬೈ ಎಂಬಲ್ಲಿ ತಮ್ಮ ಸಂಸ್ಧೆಯ ನೆಲೆಯೊಂದನ್ನು ಸ್ಧಾಪಿಸಿದರು. 1848ರಲ್ಲಿ ರೆಬ್ಮನ್ ಕಿಲಿಮಾಂಜಾರೋ ಪ್ರವೇಶಿಸಿದ. ಕ್ರಾಫ್ 1849ರಲ್ಲಿ ಕೀನ್ಯ ಪರ್ವತ ಪ್ರದೇಶವನ್ನು ಸಂದರ್ಶಿಸಿದ.

 18ನೆಯ ಶತಮಾನದ ಮಧ್ಯಕಾಲದಲ್ಲಿ ಮಧ್ಯ ಕೀನ್ಯ ಪ್ರದೇಶಕ್ಕೆ ಪ್ರವೇಶಿಸಿದ ಮಾಸೈ ಜನ ಕ್ರಮೇಣ ಪ್ರಬಲರಾಗಿ 1859ರ ವೇಳೆಗೆ ಮಾಂಬಾಸ ತೀರದ ವರೆಗೂ ತಮ್ಮ 
ಪ್ರಭಾವ ಬೀರಿದ್ದರು. ಆ ಪಂಗಡದ ನಾಯಕನಾದ ಲೈಬೊನನ (ಮಂತ್ರ ವಾದಿ-ವೈದ್ಯ-ದೊರೆ) ನೇತೃತ್ವದಲ್ಲಿ ಯುದ್ಧಪಟುಗಳಾದ (ಮೊರಾನ್) ಇವರು ನೆರೆಹೊರೆಯ ಬುಡಕಟ್ಟಿನ ಜನರಿಗೆ-ಬ್ಯಾಂಟು ಪಂಗಡದ ರೈತರಿಗೆ-ಭಯದಾಯಕರಾಗಿದ್ದರು. ಆದರೆ ಪಶ್ಚಿಮ ಭಾಗದಲ್ಲಿದ್ದ ನಾಂದಿ ಮತ್ತು ಪೂರ್ವಭಾಗ ದಲ್ಲಿದ್ದ ಟವೇಟ ಮತ್ತು ಟೈಟ ಜನ ಇವರಿಗೆ ಭಯಪಡದೆ ಸ್ವರಕ್ಷಣೆ ಮಾಡಿಕೊಳ್ಳುತ್ತಿದ್ದರು. ಹೆಚ್ಚು ಜನಸಂಖ್ಯೆ ಹೊಂದಿದ್ದ ಕಿಕೂಯು ಪಂಗಡದವರು ಕೂಡ ಮಾಸೈ ಪಂಗಡದವರಿಗೆ ಅಂಜಿ ಬೆಟ್ಟಗುಡ್ಡಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಉತ್ತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಿಕೂಯುಗಳು ಕ್ರಮೇಣ ಹಬ್ಬಿಕೊಂಡು ವ್ಯವಸಾಯಕ್ಕೆ ಗಮನ ಕೊಡಲಾರಂಭಿಸಿದರು. ಕ್ರಮೇಣ ಪ್ರಬಲರಾಗುತ್ತಿದ್ದ ಕಿಕೂಯುಗಳಲ್ಲಿ ಕೇಂದ್ರೀಕೃತ ನಾಯಕತ್ವವಿಲ್ಲದಿದ್ದುದೇ ಅವರು ಮಾಸೈ ಪಂಗಡದವರಿಗೆ ಅಂಜಲು ಕಾರಣವಾಗಿತ್ತು. 1890ರ ದಶಕದಲ್ಲಿ ಉಂಟಾದ ಸಾಂಕ್ರಾಮಿಕ ರೋಗಗಳಿಂದ ಕಿಕೂಯು ಮತ್ತು ಮಾಸೈಗಳು ಕಷ್ಟದೆಶೆಯಲ್ಲಿದ್ದರು. ಆ ಸಮಯದಲ್ಲಿ ಮಾಸೈಗಳ ನಾಯಕ ಲೈಬೊನ್ ಎಂಬಟಿಯನ್ ತೀರಿಕೊಂಡ. ಅನಂತರ ಅವನ ಕಿರಿಯ ಮಗ ಲೆನಾನ ಆ ಜನರಲ್ಲಿ ಶಾಂತಿಯನ್ನು ಸ್ಧಾಪಿಸಿದರೂ ಅವರ ಮೊದಲಿನ ಶಕ್ತಿಸಾಮಥ್ರ್ಯಗಳು ಪುನಹ ಕಂಡುಬರಲಿಲ್ಲ. ಈ ಸುಮಾರಿಗೆ ಬ್ರಿಟಿಷರು ಕೀನ್ಯವನ್ನು ಪ್ರವೇಶಿಸಿದರು.

 ಬ್ರಿಟನಿನ ಜೋಸೆಫ್ ಥಾಮ್ಸನ್ 1883ರಲ್ಲಿ ಮಾಸೈ ಪ್ರದೇಶದಲ್ಲಿ ಸಂಚರಿಸಿದ. ಬ್ರಿಟಿಷ್ ಪೂರ್ವ ಆಫ್ರಿಕ ಕಂಪನಿ ಅದೇ ಸಮಯಕ್ಕೆ ಹುಟ್ಟುಕೊಂಡಿತು. 1886ರಲ್ಲಿ ಜರ್ಮನರೂ ಕೀನ್ಯ ಪ್ರವೇಶ ಮಾಡಿದರು. ಈ ಮಧ್ಯೆ eóÁನ್‍ಜಿóಬಾರಿನ ಸುಲ್ತಾನನ ಹಕ್ಕುಬಾಧ್ಯತೆಗಳ ವಿಷಯದಲ್ಲಿ ಕೆಲವು ಸಮಸ್ಯೆಗಳುದ್ಬವಿಸಲು ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸಗಳು ತೀರಪ್ರದೇಶದಲ್ಲಿ ರುವುನಾ ಮತ್ತು ಟಾನ ನದಿಗಳ ಮಧ್ಯದ 10 ಮೈಲಿಗಳ ಅಗಲದ ಭೂಭಾಗ ಸುಲ್ತಾನನಿಗೆ ಸೇರಿದ್ದೆಂದು ಒಪ್ಪಿಕೊಂಡು ಇತರ ಪ್ರದೇಶಗಳಲ್ಲಿ ಯಾವಯಾವ ಭಾಗಗಳಲ್ಲಿ ತಮ್ಮ ಪ್ರಭಾವ ಬೆಳೆಸಬಹುದೆಂಬುದರ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಂಡುವು. ಈ ಒಪ್ಪಂದದ ಪ್ರಕಾರ ಈಗಿನ ಕೀನ್ಯದ ಬಹುಭಾಗ ಬ್ರಿಟಿಷರ ಪ್ರಭಾವಕ್ಕೊಳಗಾಯಿತು.  1887ರಲ್ಲಿ ಬ್ರಿಟಿಷ್‍ಪೂರ್ವ ಆಫ್ರಿಕ ಸಂಘ ಮತ್ತು ವಿಲಿಯಂ ಮ್ಯಕಿನ್ನಾನ್ ಅಲ್ಲಿಯ ಸುಲ್ತಾನನಿಂದ ಅವನ ಪ್ರದೇಶದ ವೇಲೆ 50 ವರ್ಷಗಳ ಗೇಣಿ ಹಕ್ಕನ್ನು ಪಡೆದರು. ಕಾಲಕ್ರಮದಲ್ಲಿ ಅದು ಶಾಶ್ವತವಾಗಿ ಅವರಿಗೇ ಸೇರುವಂತಾಯಿತು. ಬ್ರಿಟಿಷ್ ಪೂರ್ವ ಆಫ್ರಿಕ ಸಂಘ ಮತ್ತು ವಿಲಿಯಂ ಮ್ಯಕಿನ್ನಾನ್ ಅಲ್ಲಿಯ ಸುಲ್ತಾನನಿಂದ  ಅವನ ಪ್ರದೇಶದ ಮೇಲೆ 50 ವರ್ಷಗಳ ಗೇಣಿ ಹಕ್ಕನ್ನು ಪಡೆದರು. ಕಾಲಕ್ರಮದಲ್ಲಿ ಅದು ಶಾಶ್ವತವಾಗಿ ಅವರಿಗೇ ಸೇರುವಂತಾಯಿತು. ಬ್ರಿಟಿಷ್ ಸರ್ಕಾರಕ್ಕೆ ಈ ಪ್ರದೇಶದ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟವಿಲ್ಲದುದರಿಂದ 1888ರಲ್ಲಿ ಈ ಸಂಘವನ್ನು ಕಾನೂನುಬದ್ಧವಾದ ಬ್ರಿಟಿಷರ ಹಿತಾಸಕ್ತಿಗಳನ್ನು ಕಾಯುವ ಕರ್ತವ್ಯವನ್ನು ಆ ಕಂಪನಿಗೆ ಒಪ್ಪಿಸಿತು.

 ಆರ್ಥಿಕ ಮುಗ್ಗಟ್ಟಿನಿಂದ ಕೀನ್ಯದ ಪರಿಸ್ಧಿತಿಯನ್ನು ಸುಧಾರಿಸಲು ಸಾಧ್ಯವಾಗದೆ ತೊಳಲುತ್ತಿದ್ದಾಗ ಆ ಕಂಪನಿ ಉಗಾಂಡದ ಅಂತರ್ಯುದ್ಧದಲ್ಲಿ ಸಿಕ್ಕಿಹಾಕಿಕೊಂಡಿತು. 1894ರಲ್ಲಿ ಬುಗಾಂಡವನ್ನು ತನ್ನ ಆಶ್ರಿತ ರಾಜ್ಯವೆಂದು ಬ್ರಿಟಿಷ್ ಸರ್ಕಾರ ಫೋಷಿಸಿದ ಅನಂತರ ಕಂಪನಿಗೆ 2, 50,000 ಪೌಂಡುಗಳನ್ನು ಕೊಟ್ಟು, ಸನ್ನದನ್ನು ರದ್ದು ಪಡಿಸಿ ಅದರ ವಶದಲ್ಲಿದ್ದ ಪ್ರದೇಶವನ್ನು ತನ್ನ ನೇರ ಹತೋಟಿಗೆ ಒಳಪಡಿಸಿಕೊಂಡಿತು. ಪೂರ್ವ ಆಫ್ರಿಕ ರಕ್ಷಿತದೇಶ ಅಸ್ತಿತ್ವಕ್ಕೆ ಬಂತು. ಆ ಪ್ರದೇಶದ ಮೊದಲ ಆಡಳಿತಗಾರನಾಗಿ ಸರ್ ಆರ್ಥರ್ ಹಾರ್ಡಿಂಜನ ನೇಮಕವಾಯಿತು. ವಿವಿಧ ಪಂಗಡಗಳ ಮೇಲೆ ಬ್ರಿಟಿಷ್ ಸರ್ಕಾರದ ಆಡಳಿತವನ್ನು ಜಾರಿಗೆ ತರಲು ಬಹಳ ಶ್ರಮವಾಯಿತು. ತೀರಪ್ರದೇಶದ ಮಜ್ರುಯಿಗಳೂ ಒಳಪ್ರದೇಶಗಳಲ್ಲಿ ಕಿಕೂಯು ಮತ್ತು ಕಾಂಬ ಜನರೂ ಪಶ್ಚಿಮ ಭಾಗದಲ್ಲಿ ನಾಂದಿಗಳೂ ಬ್ರಿಟಿಷ್ ಅಧಿಕಾರವನ್ನು ವಿರೋಧಿಸಿದರು. ಮಾಸೈ ಜನ ಬ್ರಿಟಿಷರನ್ನು ವಿರೋಧಿಸದೆ ಸುಮ್ಮನಾದ್ದು ಆಶ್ಚರ್ಯದ ಸಂಗತಿ.

 ಬ್ರಿಟನಿನೊಡನೆ ಹೆಚ್ಚಿನ ಸಂಪರ್ಕ ಸಾಧ್ಯವಿಲ್ಲದಿದ್ದುದೂ ಆರ್ಥಿಕ ಆಡಚಣೆಗಳೂ 
ಬ್ರಿಟಿಷ್ ಅಧಿಕಾರ ಬಲಗೊಳ್ಳಲು  ಅಡ್ಡಿಯಾಗಿದ್ದುವು. ಅಲ್ಲದೆ ಸ್ಧಳೀಯ ಪಂಗಡಗಳಲ್ಲಿ ಸುವ್ಯವಸ್ಧಿತ ಆಡಳಿತ ಪದ್ಧತಿಯಿರಲಿಲ್ಲ. ಬ್ರಿಟಿಷರು ಎಲ್ಲೆಡೆಯಲ್ಲೂ ತಮ್ಮ ಆಡಳಿತ ಪದ್ದತಿಯನ್ನೇ ಸ್ಧಾಪಿಸಿದರು. ಈ ಕೆಲಸ ಕುಂಟುತ್ತ ನಿಧಾನವಾಗಿ ಸಾಗಿತು. ವಿಕ್ಟೋರಿಯ ಸರೋವರ ಪ್ರಾಂತ್ಯದ ನಿಸರ್ಗ ಸಂಪತ್ತಿನ ಉಪಯೋಗ ಪಡೆಯುವ ಉದ್ದೇಶದಿಂದ ತೀರಪ್ರದೇಶದಿಂದ ವಿಕ್ಟೋರಿಯ ಪ್ರದೇಶದವರೆಗೆ ರೈಲುಮಾರ್ಗವನ್ನು ಹಾಕುವ ತೀರ್ಮಾನ ಕೈಗೊಳ್ಳಲಾಯಿತು. ಪೂರ್ವ ಆಫ್ರಿಕದ ಆರ್ಥಿಕ ಸಂಪತ್ತಿನ ಉಪಯೋಗ ಪಡೆಯಲೂ ಆ ಪ್ರದೇಶದ ರಕ್ಷಣಾವ್ಯವಸ್ಧೆಯ ದೃಷ್ಟಿಯಿಂದಲೂ ರೈಲುಮಾರ್ಗ ಅವಶ್ಯವಾಗಿತ್ತು. 1895ರಲ್ಲಿ ಮಾಂಬಾಸದ ಬಳಿ ಈ ಕೆಲಸ ಪ್ರಾರಂಭವಾಗಿ 1903ರ ವೇಳೆಗೆ ಪೂರ್ಣಗೊಂಡಿತು. ಹೆಚ್ಚು ಹಣ ವ್ಯಯವಾಗಿದ್ದುದರಿಂದ ಹುಟ್ಟುವಳಿಯನ್ನು ಹೆಚ್ಚಿಸುವ ಸಲುವಾಗಿ ಬ್ರಿಟಿಷ್ ಕೃಷಿಕರನ್ನೂ ವ್ಯಾಪಾರಿಗಳನ್ನೂ ಈ ಒಳಪ್ರದೇಶದಲ್ಲಿ ನೆಲೆಸಲು ಉತ್ತೇಜಿಸಿ ತನ್ಮೂಲಕ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತು. 1901ರಿಂದ ಅಲ್ಲಿಯ ಆಡಳಿತಗಾರನಾಗಿದ್ದ ಚಾಲ್ರ್ಸ್ ಎಲಿಯಟ್ ಇಂಗ್ಲೆಂಡಿನ ಜನರನ್ನಲ್ಲದೆ ದಕ್ಷಿಣ ಆಫ್ರಿಕದಲ್ಲಿದ್ದ ಐರೋಪ್ಯರನ್ನೂ ಇಲ್ಲಿಯ ವಸಾಹತು ಕಾರ್ಯಕ್ಕೆ ಆಹ್ವಾನಿಸಿ ನೆರವು ನೀಡಿದ. ಕ್ರಮೇಣ ರಿಫ್ಟ್ ಕಣಿವೆ ಮತ್ತು ಅದರಾಚಿನ ಪ್ರಸ್ಧಭೂಮಿ ಪ್ರದೇಶಗಳೂ ಬಿಳಿಯರ ವಸಾಹತುಗಳಾದವು. ಆ ಪ್ರದೇಶದಲ್ಲಿದ್ದ ದೇಶೀಯರಿಗೆ ಇದರಿಂದ ಹೆಚ್ಚಿನ ಅನ್ಯಾಯವಾಯಿತು. ಆಫ್ರಿಕದ ಜನ ಬಿಳಿಯರಲ್ಲಿ ಕೂಲಿಗಳಾಗಿ ದುಡಿಯಲು ಉತ್ಸಾಹ ತೋರದಿದ್ದುದರಿಂದ ಕೆಲಸಗಾರರ ಅಭಾವವೇರ್ಪಟ್ಟಿತು. ಕಡ್ದಾಯ ಶ್ರಮ ಪದ್ಧತಿಯನ್ನು ವಿಧಿಸಿದರೂ ಹೆಚ್ಚು ಪ್ರಯೋಜನವಾಗಲಿಲ್ಲ. ಒಂದನೆಯ ಮಹಾಯುದ್ದಾನಂತರ ಕಡ್ಡಾಯ ಶ್ರಮ ಪದ್ಧತಿಯನ್ನು ರದ್ಧುಗೊಳಿಸಲಾಯಿತು.  1904ರಲ್ಲಿ ಎಲಿಯಟನ ನಿರ್ಗಮನದ ಅನಂತರ ಆಫ್ರಿಕವನ್ನು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತಗೊಳಿಸಿದುದರಿಂದ ಅವರಲ್ಲಿ ಅತೃಪ್ತಿ ಬೆಳೆಯಿತು.

 ರೈಲುಮಾರ್ಗ ನಿರ್ಮಾಣದಲ್ಲಿ ದೇಶೀಯರು ಕೆಲಸ ಮಾಡಲು ಆಸಕ್ತಿ ತೋರದಿದ್ದದರಿಂದ ಸಹಸ್ರಾರು ಮಂದಿ ಭಾರತೀಯ ಕೂಲಿಗಳನ್ನು ಕರೆತರಲಾಯಿತು. ಇವರಲ್ಲಿ ಕೆಲವರು ಒಪ್ಪಂದದ ಕೆಲಸ ಮುಗಿದ ಅನಂತರ ಹಿಂದಿರುಗಿದರು. ಅನೇಕರು ಅಲ್ಲಿಯೇ ನೆಲಸಿ ವ್ಯಾಪಾರದಲ್ಲಿ ತೊಡಗಿದರು; ಹೊಸ ಪ್ರದೇಶಗಳಿಗೆ ಹೋಗಿ ಸಾಹಸದಿಂದ ವ್ಯಾಪಾರ ಮುಂದುವರಿಸಿ ಪೂರ್ವ ಆಫ್ರಿಕ ರಕ್ಷಿತಪ್ರದೇಶದ ಆರ್ಥಿಕಾಭಿವೃದ್ಧಿಗೆ ಕಾರಣರಾದರು. ಭಾರತೀಯರು ಅಲ್ಲಿ ಭೂಸ್ವಾಮಿಗಳಾಗುವುದನ್ನು ಅಲ್ಲಿಯ ಬಿಳಿಯರು ವಿರೋಧಿಸಿದರು. ಆಡಳಿತವೂ ಬಿಳಿಯರ ಪರವಾಗಿಯೇ ನಿಂತಿತು. ಈ ಮಧ್ಯೆ ಬಿಳಿಯರು ತಮ್ಮ ಸಂಘ ಸಂಸ್ಧೆಗಳನ್ನು ಕಟ್ಟಿಕೊಂಡು ಅವುಗಳ ಮೂಲಕ ಆಡಳಿತದ ಮೇಲೆ ಒತ್ತಾಯ ತಂದು ಭಾರತೀಯರಿಗೆ ಸರ್ಕಾರದ ಆಡಳಿತ ಮತ್ತು ಆರ್ಥಿಕ ಮುನ್ನಡೆಗಳಲ್ಲಿ ಪಾಲು ಸಿಕ್ಕದಂತೆ ಮಾಡುತ್ತಿದ್ದರು. 1907ರ ವೇಳೆಗೆ ಬಿಳಿಯರ ಇಬ್ಬರು ಪ್ರತಿನಿಧಿಗಳು ಆಡಳಿತ ಸಲಹಾ ಮಂಡಲಿಯನ್ನು ಪ್ರವೇಶಿಸಿ ತಮ್ಮವರ ಪರವಾಗಿ ಪ್ರಭಾವ ಬೀರಿತು. ಹೆಚ್ಚು ಜನ ಗಂಡಸರು ಯುದ್ಧದಲ್ಲಿ ಪಾಲ್ಗೊಂಡುದರಿಂದ ಅನೇಕ ಕೃಷಿ ಕ್ಷೇತ್ರಗಳು ಪಾಳುಬಿದ್ದುವು; ಸಣ್ಣಪುಟ್ಟ ರೈತರು ದಿವಾಳಿಯೆದ್ದರು. ಬ್ಯಾಂಕುಗಳಿಂದ ನಿರೀಕ್ಷಿತ ಸಹಾಯ ದೊರಕಲಿಲ್ಲ. 1920ರ ದಶಕದಲ್ಲಿ ವಿಶ್ವದ ಇತರ ರಾಷ್ಟ್ರಗಳಲ್ಲಿ ಸಂಭವಿಸಿದ ಆರ್ಥಿಕ ಏರುಪೇರುಗಳ ಪರಿಣಾಮ ಕೀನ್ಯದ ಮೇಲೂ ಆಯಿತು. ಆದರೆ ಆ ದಶಕದ ಉತ್ತರಾರ್ಧದ ವೇಳೆಗೆ ಬಿಳಿಯರು ಚೇತರಿಸಿಕೊಂಡರು. ಮತ್ತೊಮ್ಮೆ 1930ರ ದಶಕದಲ್ಲಿ ತಲೆದೋರಿದ ಮುಗ್ಗಟ್ಟಿನಿಂದ ಹೊಸ ಸಮಸ್ಯೆಗಳು ಸಂಭವಿಸಿದರೂ ದೇಶದ ಆರ್ಥಿಕಸ್ಧಿತಿ ಹೊಸದಾಗಿ ನಿರ್ಮಿತವಾದ ರೈಲುಮಾರ್ಗಗಳ ಪ್ರಭಾವದಿಂದ ಸುಧಾರಿಸಿತು.

 1920ರಲ್ಲಿ ಈ ಪ್ರದೇಶವನ್ನು ಕೀನ್ಯ ಎಂಬ ಹೆಸರಿನ ವಸಾಹತು ರಾಜ್ಯವೆಂದು ಘೋಷಿಸಲಾಯಿತು. ಆ ವೇಳೆಗೆ ಬಿಳಿಯರಿಗೆ ರಾಜ್ಯದ ಆಡಳಿತ ಸಮಿತಿಗೆ ಸದಸ್ಯರನ್ನು ಚುನಾಯಿಸುವ ಹಕ್ಕು ದೊರೆತಿತ್ತು. ಭಾರತೀಯರು ತಮಗೂ ಸಮಾನ ಹಕ್ಕು ಬೇಕೆಂದು ಚಳವಳಿ ಪ್ರಾರಂಭಿಸಿದರು. ಕೀನ್ಯನರ ಹಕ್ಕುಬಾಧ್ಯತೆಗಳಿಗೆ ಹೆಚ್ಚಿನ ಪ್ರಾಧಾನ್ಯವಿರಬೇಕೆಂದೂ ಅಲ್ಪಸಂಖ್ಯಾತರ ಹಕ್ಕುಬಾಧ್ಯತೆಗಳೂ ರಕ್ಷಿತವಾಗಬೇಕೆಂ
ದೂ 1923ರಲ್ಲಿ ಬ್ರಿಟಿಷ್ ವಸಾಹತು ಕಾರ್ಯದರ್ಶಿ ಡೆವಾನ್ ಷೈರ್  ಡ್ಯೂಕ್ ತೀರ್ಪು ನೀಡಿದ. ಈ ತೀರ್ಪು ವಸಾಹತು ಕಾರ್ಯದರ್ಶಿ ಡೆವಾನ್‍ಷೈರ್ ಡ್ಯೂಕ್ ತೀರ್ಪು ನೀಡಿದ. ಈ ತೀರ್ಪು ಬಿಳಿಯರಿಗೆ ಅನುಕೂಲಾಗಿತ್ತು. ಅವರು ಆಫ್ರಿಕನರ ಹಕ್ಕುಬಾಧ್ಯತೆಗಳ ಪೋಷಕರೆಂದು ಹೇಳಿಕೊಂಡರೇ ವಿನಾ ಇದರಿಂದ ದೇಶೀಯರಿಗೆ ಯಾವ ಸೌಲಭ್ಯವೂ ದೊರಕಲಿಲ್ಲ. ಅವರ ಸಾಮಾಜಿಕ ಆರ್ಥಿಕ ಪರಿಸ್ಧಿತಿ ಸುಧಾರಿಸಲಿಲ್ಲ. ಅವರ ವಿದ್ಯಾಭ್ಯಾಸಕ್ಕೆ ಆಡಳಿತ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ದೇಶೀಯರಿಗೆ ಈ ವೇಳೆಗೆ ಅವರ ಹಕ್ಕುಗಳ ಅರಿವು ಮೂಡಿತ್ತು. ಬಿಳಿಯರ ಮಾದರಿಯಲ್ಲಿ ಅವರೂ ಸಂಘಸಂಸ್ಧೆಗಳನ್ನು ಕಟ್ಟಿಕೊಂಡು ತಮ್ಮ ಹಕ್ಕುಗಳಿಗಾಗಿ ಒತ್ತಾಯ ತರಲಾರಂಭಿಸಿದರು. 1921ರಲ್ಲಿ ಕಿಕೂಯು ಯುವಕ ಸಂಘ ಹುಟ್ಟಿಕೊಂಡಿತು. 1925ರಲ್ಲಿ ಅದಕ್ಕೆ ಕಿಕೂಯು ಕೇಂದ್ರೀಯ ಸಂಘವೆಂದು ನಾಮಕರಣವಾಯಿತು. ಆಢಳಿತ ಸಮಿತಿಯಲ್ಲಿ ತನಗೂ ಪ್ರಾತಿನಿಧ್ಯ ದೊರಕಬೇಕೆಂದು ಸಂಘ ಬಯಸಿತಲ್ಲದೆ ಕಿಕೂಯು ಕಾರ್ಮಿಕರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳು ಬೇಕೆಂದು ಕೇಳಲಾರಂಭಿಸಿದರು.

 ಈ ಮಧ್ಯ ಪೂರ್ವ ಆಫ್ರಿಕದಲ್ಲಿ ಬ್ರಿಟಿಷರ ಪ್ರಭಾವದಲ್ಲಿದ್ದ ಉಗಾಂಡ ಮತ್ತು ಕೀನ್ಯವನ್ನೂ ಜರ್ಮನ್ ಪ್ರದೇಶಗಳನ್ನೂ ಒಂದುಗೂಡಿಸುವ ಪ್ರಯತ್ನ ನಡೆಯುತ್ತಿತ್ತು. ಮೊದಮೊದಲು ಅಲ್ಲಿಯ ಬಿಳಿಯ ವಸಾಹತುಗಾರರು ಇದಕ್ಕೆ ಒಪ್ಪಲಿಲ್ಲ. ಕ್ರಮೇಣ ಅವರು ಇದಕ್ಕೆ ಬೆಂಬಲ ನೀಡಿದರು. ಆ ವೇಳೆಗೆ ಎರಡನೆಯ ಮಹಾಯುದ್ಧ ಸಂಭವಿಸಿತು. ಇಟಲಿ ನೀಡಿದರು. ಆ ವೇಳೆಗೆ ಎರಡನೆಯ ಮಹಾಯುದ್ಧ ಸಂಭವಿಸಿತು. ಇಟಲಿ ಶತ್ರುರಾಷ್ಟ್ರವಾಗಿದ್ದುರಿಂದ ಕೀನ್ಯದ ರಕ್ಷಣೆಗೆ ಆತಂಕವೇರ್ಪಟ್ಟಿತು. ಆದರೆ ಇಟಲಿ ಶರಣಾಗತವಾದಾಗ ಕೀನ್ಯದ ಸೈನ್ಯ ವಿಶ್ವದ ಇತರ ಕ್ಷೇತ್ರಗಳಲ್ಲಿ ಹೋರಾಟದಲ್ಲಿ ನಿರತವಾಯಿತು. 1946ರಲ್ಲಿ ಇಬ್ಬರು, 1948ರಲ್ಲಿ ನಾಲ್ವರು ಮತ್ತು 1951ರಲ್ಲಿ ಎಂಟು ಮಂದಿ ದೇಶೀಯ ಪ್ರತಿನಿಧಿಗಳು ಈ ಸಭೆಗೆ ಸದಸ್ಯರಾದರು. 1948ರಲ್ಲಿ ಕೀನ್ಯ, ಉಗಾಂಡ ಮತ್ತು ಟಾಂಗನ್ಯೀಕ ರಾಜ್ಯಗಳ ಕೆಲವು ಆಡಳಿತ ಇಲಾಖೆಗಳನ್ನು ಪೂರ್ವ ಆಫ್ರಿಕ ಹೈ ಕಮಿಷನ್ನಿಗೆ ಒಪ್ಪಿಸಲಾಯಿತು.

 1950ರ ದಶಕದಲ್ಲಿ ಮೌ-ಮೌ ಚಳವಳಿ ಪ್ರಾರಂಭವಾದುದರ ಫಲವಾಗಿ ದೇಶದಲ್ಲಿ ತುರ್ತು ಪರಿಸ್ಧಿತಿ ಘೋಷಿತವಾಯಿತು. ಈ ಚಳವಳಿಯಲ್ಲಿ ಕಿಕೂಯು ಪಂಗಡದವರದೇ ಪ್ರಾಧಾನ್ಯ. ಇದು ಕೀನ್ಯದ ಬಿಳಿಯರ ವಿರುದ್ಧವಾದ ಚಳವಳಿ. ಜೋಮೋಕೆನ್ಯಾಟ ಇದರ ನಾಯಕ. ಅವನಿಗೂ ಅವನ ಜೊತೆಗಾರರಿಗೂ 1953ರಲ್ಲಿ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. 1959 ರಲ್ಲಿ ಅವನಿಗೆ ವಿಮೋಚನೆಯಾದರೂ ಅವನನ್ನು ನಿರ್ಬಂಧಕ್ಕೆ ಒಳಪಡಿಸಲಾಯಿತು. ತುರ್ತುಪರಿಸ್ಧಿತಿಯ ಅಂತ್ಯವಾದ್ದು 1960ರಲ್ಲಿ.

 1957ರಲ್ಲಿ ಅಲ್ಲಿಯ ಆಡಳಿತಕ್ಕೆ ಆಯ್ಕೆ ಹೊಂದಿದ್ದ ಪ್ರತಿನಿಧಿಗಳ ಸಂಖ್ಯೆ 8. 1958ರಲ್ಲಿ ಇದನ್ನು ಹೆಚ್ಚಿಸಲಾಯಿತು. 1960ರ ಲಂಡನ್ ಸಮ್ಮೇಳನದ ಫಲವಾಗಿ ವಿಧಾನಸಭೆಯಲ್ಲಿ ದೇಶಿಯರಿಗೆ ಬಹುಮತ ದೊರಕಿತಲ್ಲದೆ ಮಂತ್ರಿಮಂಡಲದ 10 ಸ್ಧಾನಗಳಲ್ಲಿ 4 ಅವರಿಗೆ ಲಭ್ಯವಾಯಿತು. ಕೀನ-ಆಫ್ರಿಕ ರಾಷ್ಟ್ರೀಯ ಒಕ್ಕೂಟ ಮತ್ತು ಕೀನ್ಯ-ಆಫ್ರಿಕ ಪ್ರಜಾಸತ್ತಾತ್ಮಕ ಒಕ್ಕೂಟಗಳು ಪ್ರಮುಖ ರಾಜಕೀಯ ಪಕ್ಷಗಳಾಗಿ ಮುಂದೆ ಬಂದುವು. ಮೊದಲಿಗೆ ಟಾಮ್ಬೋಯ, ಅನಂತರ ಜೋಮೊ ಕೆನ್ಯಾಟ ಇವರು ರಾಷ್ಟ್ರೀಯ ಒಕ್ಕೂಟದ ನೇತಾರರು. 1962ರ ಲಂಡನ್ ಸಮ್ಮೇಳನದಲ್ಲಿ ಕೀನ್ಯದ ಸಂವಿಧಾನ ರೂಪಿತವಾಯಿತು. 1963ರ ಮಹಾ ಚುನಾವಣೆಗಳಲ್ಲಿ ರಾಷ್ಟ್ರೀಯ ಒಕ್ಕೂಟ ಪಕ್ಷಕ್ಕೆ ಬಹುಮತ ದೊರಕಿತು. ಆ ವರ್ಷದ ಜೂನ್ ತಿಂಗಳಲ್ಲಿ ಪೂರ್ಣ ಸ್ವಯಂಮಾಡಳಿತ ಅಧಿಕಾರ ಪಡೆದಿದ್ದ ಜನಪ್ರಿಯ ಸರ್ಕಾರ ರಚಿತವಾಯಿತು. 1963ರ ಡಿಸೆಂಬರ್ 12ರಂದು ಕೀನ್ಯ ಸ್ವತಂತ್ರ ರಾಷ್ಟ್ರವೆಂದು ಘೋಷಿತವಾಗಿ, ಕಾಮನ್ವೆಲ್ತಿನ ಸದಸ್ಯ ರಾಷ್ಟ್ರವಾಯಿತು.

 ಈ ಮಧ್ಯೆ ರಾಜ್ಯದ ನೈಋತ್ಯ ಭಾಗದಲ್ಲಿದ್ದ ಸೊಮಾಲಿಗಳು ಕೀನ್ಯದಿಂದ ಬೇರ್ಪಟ್ಟು ಸೊಮಾಲಿ ಗಣರಾಜ್ಯಕ್ಕೆ ಸೇರಿಕೊಳ್ಳಬೇಕೆಂದು ಚಳವಳಿ ಪ್ರಾರಂಭಿಸಿದರು. 1963ರ ಡಿಸೆಂಬರ್ 10ರಂದು ಜಾóನ್‍ಜಿóಬಾರ್ ಸ್ವತಂತ್ರವಾಗಿ, ಕೀನ್ಯ ಸಮುದ್ರತೀರದಲ್ಲಿ ತನಗೆ ಸೇರಿದ್ದ ಪ್ರದೇಶವನ್ನು ಕೀನ್ಯಕ್ಕೆ ಒಪ್ಪಿಸಿತು. ಮೌಮೌ ಚಳವಳಿಯೆ ಫಲವಾಗಿ 
ಕಿಕೂಯುಗಳು ದೊಡ್ಡ ಗ್ರಾಮಗಳಲ್ಲಿ ಕೇಂದ್ರೀಕೃತರಾದರು. ಭೂಸುಧಾರಣೆಗಳು ಜಾರಿಗೆ ಬಂದುವು. ಕೃಷಿ ಅಭಿವೃದ್ಧಿಗಾಗಿ ದೇಶೀಯರಿಗೆ ಹೆಚ್ಚಿನ ಆರ್ಥಿಕ ಸಹಾಯ ನೀಡಲಾಯಿತು. ವಿದೇಶಿ ಬಂಡವಾಳ ಅಧಿಕ ಪ್ರಮಾಣದಲ್ಲಿ ದೊರಕಿದುದರ ಫಲವಾಗಿ ಕೃಷಿಯ ಜೊತೆಗೆ ಕೈಗಾರಿಕಾಭಿವೃದ್ಧಿಯೂ ಸಾಧ್ಯವಾಗಿ ಇಂದು ಆಫ್ರಿಕದ ರಾಜ್ಯಗಳಲ್ಲಿ ಕೀನ್ಯ ಒಂದು ಪ್ರಮುಖ ರಾಜ್ಯವಾಗಿದೆ.

 ಆಡಳಿತ ಮತ್ತು ಸಾಮಾಜಿಕ ಪರಿಸ್ಧಿತಿ: ಸ್ವಾತಂತ್ರ್ಯಪೂರ್ವದಲ್ಲಿ ಆಡಳಿತಾಧಿಕಾರಿಗೆ ಸಲಹೆ ನೀಡಲು ಒಂದು ಮಂತ್ರಿಮಂಡಲವಿತ್ತು. ರಾಜ್ಯದ ಶಾಸನಗಳನ್ನು ಆತ ವಿಧಾನಸಭೆಯ ಸಲಹೆ ಮತ್ತು ಒಪ್ಪಿಗೆ ಪಡೆದು ಮಾಡಬೇಕಾಗಿತ್ತು. 1962ರ ಫೆಬ್ರವರಿ-ಏಪ್ರಿಲ್ ತಿಂಗಳುಗಳಲ್ಲಿ ಲಂಡನ್ ಅಧಿವೇಶನದಲ್ಲಿ ಪ್ರಮುಖ ರಾಜಕೀಯ ಧುರೀಣರು ಕೀನ್ಯದ ಸಂವಿಧಾನವನ್ನು ರೂಪಿಸಿದರು. 1963ರ ಜೂನ್ 1ರಿಂದ ಅದು ಜಾರಿಗೆ ಬಂತು. 1963ರ ಡಿಸೆಂಬರ್ 12ರಂದು ಸ್ವತಂತ್ರವಾದ ಮೇಲೆ ಅದು ಕಾಮನ್ವೆಲ್ತನ್ನು ಸೇರಿತು. ಬ್ರಿಟನಿನ ರಾಣಿಯನ್ನು ಕೀನ್ಯದ ರಾಣಿಯೆಂದು ಘೋಷಿಸಲಾಯಿತು. 1964ರಲ್ಲಿ ಕೀನ್ಯ ಗಣರಾಜ್ಯವಾಯಿತು. ಹೊಸ ಸಂವಿಧಾನದ ಪ್ರಕಾರ ಕೀನ್ಯರ ಕಾರ್ಯಾಂಗಮುಖ್ಯ ಅದರ ಅಧ್ಯಕ್ಷ; ಆತ ಇದರ ನಿರ್ವಹಣೆಗಾಗಿ ಪ್ರಧಾನ ಮಂತ್ರಿಯಿಂದೊಡಗೂಡಿದ ಸಂಪುಟವನ್ನು ನೇಮಿಸುತ್ತಾನೆ. 1963 ವರೆಗೂ ಸೆನೆಟ್ ಮತ್ತು ಪ್ರತಿನಿಧಿ ಸಭೆಗಳೆಂಬ ಎರಡು ವಿಧಾನ ಸದನಗಳಿದ್ದುವು. ಅವೆರಡನ್ನೂ ಒಂದುಗೂಡಿಸಿ  ಅವೆರಡನ್ನೂ ಒಂದುಗೂಡಿಸಿ ರಾಷ್ಟ್ರೀಯ ಸಭೆಯನ್ನು ನಿರ್ಮಿಸಲಾಯಿತು. ಮಧ್ಯ, ತೀರ, ನ್ಯಾನ್‍ಜ, ರೀಫ್ಟ್ ಕಣಿವೆ, ದಕ್ಞಿಣ, ಉತ್ತರ  ಎಂಬ ಆರುಪ್ರಾಂತ್ಯಗಳಿವೆ. ನೈರೋಬಿ ಪ್ರಾಂತ್ಯಾತೀತ ಜಿಲ್ಲೆ.

 ಕೀನ್ಯದ ಪ್ರಮುಖ ರಾಜಕೀಯ ಪಕ್ಷಗಳು ಕೀನ್ಯ-ಆಫ್ರಿಕ ರಾಷ್ಟ್ರೀಯ ಒಕ್ಕೂಟ (ಕಾನು) ಮತ್ತು ಕೀನ್ಯ-ಆಫ್ರಿಕ ಪ್ರಜಾಸತ್ತಾತ್ಮಕ ಒಕ್ಕೂಟ (ಕಾಡು) ಕಿಕೂಯು ಮತ್ತು ಲುವೊ ಎಂಬೆರಡು ಪ್ರಬಲ ಪಂಗಡಗಳ ಬೆಂಬಲವನ್ನು ಕಾನು ಪಡೆದಿದೆ. ಕಾಡುವಿಗೆ ಕೆಕೂಯು ಪಂಗಡದ ಹಿಡಿತವನ್ನು ತಪ್ಪಿಸಿಕೊಳ್ಳಬಯಸುವ ಇತರ ಅಲ್ಪ ಸಂಖ್ಯಾತ ಬುಡಕಟ್ಟಿನವರು ಬೆಂಬಲಿಗರು. ಬಲಿಷ್ಟ ಕೇಂದ್ರ ಸರ್ಕಾರವನ್ನು ಕಾನು ಪ್ರತಿಪಾದಿಸುತ್ತದೆ. ಕಾಡು ಇದಕ್ಕೆ ವಿರೋಧ. ಕಾನು ಪ್ರಬಲವಾಗಿದ್ದು ಅಧಿಕಾರ ನಡೆಸುತ್ತಿದೆ.

 ಕೀನ್ಯದ ಕಾರ್ಮಿಕರ ಚಳವಳಿ ಬ್ರಿಟಿಷ್ ಕಾರ್ಮಿಕ ಚಳವಳಿಯ ಮಾದರಿಯದು. ಅಲ್ಲಿ ಕ್ರಮೇಣ ಕಾರ್ಮಿಕರ ಸ್ಧಿತಿಗತಿಗಳ ಸುಧಾರಣೆಯಾಗುತ್ತಿದೆ. ಮೊದಲು ಕೈಗಾರಿಕಾ ರಂಗಕ್ಕೆ ಸೀಮಿತವಾಗಿದ್ದ ಈ ಚಳವಳಿ ಇತ್ತೀಚೆಗೆ ಕೃಷಿ ಕ್ಷೇತ್ರಕ್ಕೂ ಹಬ್ಬಿದೆ. ಕೀನ್ಯದಲ್ಲಿ 17 ಮಾಲೀಕರ ಸಂಘಗಳೂ 46 ಕಾರ್ಮಿಕ ಸಂಘಗಳೂ ಇವೆ. ಕಾರ್ಮಿಕ ಸಂಘಗಳ ಸದಸ್ಯರ ಸಂಖ್ಯೆ 46,000 ಕ್ಕೂ ಹೆಚ್ಚು.

 ಎರಡನೆಯ ಮಹಾಯುದ್ಧಾನಂತರ ಕೀನ್ಯದಲ್ಲಿ ಜೀವನ ಸ್ಧಿತಿ ಕ್ರಮೇಣ ಸುಧಾರಿಸುತ್ತಿದೆ. ಅಲ್ಲಿಯ ಬಿಳಿಯರ ಜೀವನಮಟ್ಟ ಉತ್ತಮವಾದ್ದು. ಸರ್ಕಾರೀ ಸೇವೆಯಲ್ಲಿರುವ ದೇಶೀಯರೂ ಉತ್ತಮ ಸ್ಥಿತಿಯಲ್ಲಿದ್ದಾರಾದರೂ ಜನಸಾಮಾನ್ಯರ, ಕೆಳವರ್ಗದವರ ಪರಿಸ್ದಿತಿ ಅತೃಪ್ತಿಕರ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನ ಕ್ಷೇತ್ರದಲ್ಲಿ ಸರ್ಕಾರ ಹೆಚ್ಚಾಗಿ ಆಸಕ್ತಿ ವಹಿಸಿದೆ. ಜನರ ಆರೋಗ್ಯಮಟ್ಟ ಸುಧಾರಿಸಿಲ್ಲ. ಬಿಳಿಯರ ಆರೋಗ್ಯ ಮಟ್ಟ  ಉತ್ತಮವಾಗಿದ್ದರೂ ದೇಶೀಯರಲ್ಲಿ ಬಾಲಮರಣ ಹೆಚ್ಚು. ಜನರ ಸರಾಸರಿ ಆಯುಃ ಪರಿಮಿತಿ ಕಡಿಮೆ. ನ್ಯೂಮೋನಿಯ  ಮುಂತಾದ ಶ್ವಾಸಕೋಶ ರೋಗಗಳು, ಚರ್ಮ ಮತ್ತು ಕಣ್ಣಿನ ವ್ಯಾಧಿಗಳು ಮತ್ತು ಕ್ಷಯರೋಗ ಬಹಳ ಹೆಚ್ಚಾಗಿವೆ. ಮಲೇರಿಯವೂ ಅಧಿಕ. ವೈದ್ಯಸೌಲಭ್ಯಗಳಿಗಾಗಿ ಸರ್ಕಾರ ಹೆಚ್ಚು ಹಣವನ್ನು ವ್ಯಯಿಸುತ್ತಿದ್ದರೂ ಬಹಳ ಪ್ರಯೋಜನವಾಗಿಲ್ಲ. ಸರ್ಕಾರಿ ಮತ್ತು ಖಾಸಾಗಿ ವೈದ್ಯಶಾಲೆಗಳು ಸಾಕಷ್ಟಿವೆ.

 ಸಂವಿಧಾನದ ಪ್ರಕಾರ ರೂಪಿತವಾದ ಪರಮೋಚ್ಚ ನ್ಯಾಯಾಲಯವೊಂದುಂಟು. ಅದರಲ್ಲಿ ಶ್ರೇಷ್ಠನ್ಯಾಯಾಧೀಶರಲ್ಲದೆ 11 ಮಂದಿ ನ್ಯಾಯಾಧೀಶರಿರುತ್ತಾರೆ, ನೈರೋಬಿ, ಮಾಂಬಾಸ ಮತ್ತು ಕೀಸಮುಗಳಲ್ಲಿ ಪರಮೋಚ್ಚ ನ್ಯಾಯಾಲಯ ವರ್ಷವಿಡೀ ಕಾರ್ಯಚ
ರಣೆಯಲ್ಲಿರುತ್ತದೆ. ಇದರ ಸಂಚಾರೀ ಅಧಿವೇಶನ ಇತರ ಪ್ರಮುಖ ನಗರಗಳಲ್ಲೂ ಆಗಾಗ ನಡೆಯುತ್ತದೆ. ಮ್ಯಾಜಿಸ್ಟ್ರೇಟ್ ಮತ್ತಿತರ ಕೆಳವರ್ಗದ ನ್ಯಾಯಾಲಯಗಳು ಪರಮೋಚ್ಚ ನ್ಯಾಯಲಯದ ಅಧೀನಕ್ಕೊಳಪಟ್ಟು ನ್ಯಾಯ ವಿತರಣೆ ಮಾಡುತ್ತವೆ.

 ಶಿಕ್ಷಣ: ಕೀನ್ಯದಲ್ಲಿ ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ. ಅರ್ಧಕ್ಕೂ ಕಡಿಮೆ ಜನ ಅಕ್ಷರಸ್ಥರು. ನೈರೋಬಿಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜು ಪೂರ್ವ ಆಫ್ರಿಕ ವಿಶ್ವವಿದ್ಯಾಲಯಕ್ಕೆ ಸೇರಿದೆ. ಚೀನ್ಯದ ಸುಮಾರು 5,000 ವಿದ್ಯಾರ್ಥಿಗಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಾರೆ.

 ಕ್ರೀಡೆಗಳು: ಕಾಲ್ಚೆಂಡು, ಟಿನಿಸ್, ಕ್ರಿಕೆಟ್, ಅಂಗಸಾಧನೆ ಇವೆಲ್ಲ ಸಂಘಟಿತವಾಗಿವೆ. ಕರಾವಳಿಯಲ್ಲಿ ಜಲಕ್ರೀಡೆಗಳು ಪ್ರಿಯವಾಗಿವೆ. ಕೀನ್ಯದ ಕ್ರೀಡಾಪಟುಗಳು ಕಾಮನ್ವೆಲ್ತ್ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸುತ್ತಿದ್ದಾರೆ. 1968ರಲ್ಲಿ ನಡೆದ ಒಲಂಪಿಕ್ ಕ್ರೀಡೆಗಳಲ್ಲ್ಲಿ ನಡೆದ ಒಲಂಪಿಕ್ ಕ್ರೀಡೆಗಳಲ್ಲಿ ಕೀನ್ಯನರ ಪಾತ್ರ ಗಮನಾರ್ಹವಾಗಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ